Sunday, April 6, 2008

Mother's Sacrifice: My friend's Poem

ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ
ಭೂಮಿ ತೂಕದ ಅಮ್ಮಾ..ನೀನು ಸುಳ್ಳಿಯಲ್ಲವೆ?

ಗುಮ್ಮಾ ಬಂದಾ ಎನ್ನುತ್ತಾ
ತುತ್ತು ತುತ್ತು ಅಮೃತವನ್ನು
ಮೋಸದಿಂದ ಬಾಯಿಗಿಟ್ಟು
ತಿನಿಸಿ ತನ್ನ ನೋವ ಮರೆಯುತ್ತಿದ್ದ ನೀನು ಸುಳ್ಳಿಯಲ್ಲವೆ?

ತುತ್ತು ಅನ್ನಕ್ಕು ಗತಿಯಿಲ್ಲದಿರುವಾಗ,
ಮಾಡಿದ ಒಂದಗುಲ ಗಂಜಿಯನ್ನ
ಮಕ್ಕಳಿಗೆ ತಿನ್ನಿಸಿ ನೀನು ಮಾತ್ರ
“ಯಾಕೊ ಹೊಟ್ಟೆ ನೋವು” ಅಂದು
ನೋವಿನಿಂದ ಹಸಿದು ನೆಲವ ತಬ್ಬಿ
ಮಲಗುತ್ತಿದ್ದ ಅಮ್ಮ ನೀನು ಸುಳ್ಳಿಯಲ್ಲವೇನೆ?

ಕುಡುಕ ಗಂಡನ ಹಾದರವನ್ನ
ನಿನ್ನ ಸೆರಗಿನಲ್ಲಿ ಕಟ್ಟಿಕೊಂಡು
ನೋಯುತ್ತಿದ್ದ ನೀನು ಸುಳ್ಳಿಯಲ್ಲವೆ..!
ಮಗನ ಹೊಡೆಯಲು ಬಂದ ಕುಡುಕ ಗಂಡನಿಗೆ
ಸೆರಗಿನಲ್ಲೆ ಮಗನ ಬಚ್ಚಿಟ್ಟುಕೊಂಡು
ಮಗನಿಲ್ಲವೆಂದು ಮಮತೆ ತೋರಿದ ನೀನು ಸುಳ್ಳಿಯಲ್ಲವೆ..?

ಕೊರಳಿನಲ್ಲಿ ಬೆಳ್ಳಿಯ ತಾಳಿ
ಅದಕ್ಕೆ 3 ಕಾಸಿನ ಬಂಗಾರದ ಲೇಪನ
ನಿನ್ನ ಅಕ್ಕಾ-ತಂಗಿಯರೆದುರು
ನನ್ನ ಗಂಡಾ ಮಾಡಿಸಿದ ಬಂಗಾರದ ತಾಳಿಯೆಂದು
ಎದೆಯುಬ್ಬಿಸಿ ಹೇಳಿ ಎದೆತಟ್ಟಿಕೊಂಡ ನೀನು ಸುಳ್ಳಿಯಲ್ಲವೇನೆ..?

ಅವ್ವಾ ಹುಗ್ಗಿ[ಪಾಯಸ]ಬೇಕೆಂದು
ಹಬ್ಬದ ದಿನ ಹಟ ಮಾಡಿದ ನಿನ್ನ ಮಕ್ಕಳಿಗೆ
ಅರೆಪಾವು ಗಂಜಿಗೆ 2 ಉಂಡೆಬೆಲ್ಲವನ್ನ ಹಾಕಿ
ನಮಗೆ ಹುಗ್ಗಿಯೆಂದು ಕುಡಿಸಿ ನಲಿಸಿದ ನೀನು
ಸುಳ್ಳಿಯಲ್ಲದೆ ಮತ್ತೇನು ..??

No comments: